ಬೆಂಗಳೂರು, ಜೂ.15: ಆಮ್ಲಜನಕ ಭರಿತ ಕಾಡುಗಳನ್ನು ಉಳಿಸಲು ಪ್ರತಿಯೊಬ್ಬರೂ ಹೋರಾಟ ನಡೆಸಬೇಕು ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಹೇಳಿದರು.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸುವರ್ಣ ಮಹೋತ್ಸವದ ಅಂಗವಾಗಿ ಬುಧವಾರ ಬೆಂಗಳೂರಿನಲ್ಲಿ ಪರಿಸರ ಜಾಗೃತಿ ಹಾಗೂ ಮಾಲಿನ್ಯ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳು ನಡೆದವು. ಇದಕ್ಕೂ ಮುನ್ನ ವಿಧಾನಸೌಧದಿಂದ ಕಂಠೀರುವ ಒಳಾಂಗಣ ಕ್ರೀಡಾಂಗಣದವರೆಗೆ ನಡೆದ ಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೊನಾ ಸೋಂಕಿಗೆ ಒಳಗಾಗಿದ್ದ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಹಲವು ಸಮಸ್ಯೆಗಳನ್ನು ಎದುರಿಸಿದ್ದೇವೆ. ಅದನ್ನು ಅನುಸರಿಸಿ, ಆಮ್ಲಜನಕ-ಸಮೃದ್ಧ ಕಾಡುಗಳನ್ನು ಸಂರಕ್ಷಿಸಲು ಪರಿಸರ ಮತ್ತು ಅದರ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುವ ಅಗತ್ಯವನ್ನು ನಾವು ಅರಿತುಕೊಂಡೆವು. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಆಮ್ಲಜನಕ ಭರಿತ ಅರಣ್ಯಕ್ಕಾಗಿ ಮತ್ತು ಪರಿಸರವನ್ನು ರಕ್ಷಿಸಲು ಹೋರಾಡಬೇಕು. ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಅರಣ್ಯ ಸಂರಕ್ಷಣೆಗೆ ಅರಣ್ಯ ಅಭಿವೃದ್ಧಿ ನಿಗಮ ತನ್ನದೇ ಆದ ಕೊಡುಗೆ ನೀಡುತ್ತಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ಸಿಂಗ್ ಮಾತನಾಡಿ, ಪರಿಸರ ಜಾಗೃತಿ ಮಾಸದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತಸ ತಂದಿದೆ. ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು. ಪಾಲಿಕೆ ಅಧಿಕಾರಿಗಳು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Comments